ಮಾನವೀಯ ಕಾರ್ಯಕ್ಕೆ ಮಿಡಿವ “ಯುವ ಸ್ಪಂದನ”

 ಮಾನವೀಯ ಕಾರ್ಯಕ್ಕೆ ಮಿಡಿವ “ಯುವ ಸ್ಪಂದನ”



ಗ್ರಾಮದ ಸಮಾನ ಮನಸ್ಕ ಯುವಕರು ಸೇರಿ ರಚಿಸಿದ ಒಂದು ಪುಟ್ಟ ಸಂಘಟನೆ "ಯುವ ಸ್ಪಂದನ". ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಜಾರ್ಕಳ ಮುಂಡ್ಲಿ ಗ್ರಾಮದ ಯುವಕರ ತಂಡ. ಹೆಸರಲ್ಲಿಯೇ ಇರುವಂತೆ ಇದೊಂದು ಯುವಕರಿಗೆ ಸ್ಫೂರ್ತಿ ಹಾಗೂ ಗ್ರಾಮದಲ್ಲಿನ ಜನರ ಕಷ್ಟ- ಕಾರ್ಪಣ್ಯಗಳಿಗೆ ತ್ವರಿತಗತಿಯಲ್ಲಿ ಸ್ಪಂದಿಸುವ ವೇದಿಕೆ.


2017ರ ಏಪ್ರಿಲ್ 17ರಂದು ಸ್ಥಾಪನೆಯಾದ ಈ ಗೆಳೆಯರ ಬಳಗದಲ್ಲಿ ಕೇವಲ 30 ಜನರಿದ್ದರು.ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ 100ಕ್ಕೂ ಅಧಿಕ ಸದಸ್ಯ ಬಲ ಹೊಂದಿದೆ. ಒಂದು ಹೆಜ್ಚೆ ಸ್ವಚ್ಛತೆಯ ಕಡೆಗೆ ಎಂಬ ಧ್ಯೇಯ ವ್ಯಾಕದೊಂದಿಗೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗೆ ವಿಶೇಷವಾದ ವರ್ಲಿ ಕಲಾಕೃತಿಗಳಿಂದ ಕಸದ ತೊಟ್ಟಿ ರೂಪುಗೊಳಿಸಲಾಯಿತು. ಗ್ರಾಮದ ಬಸ್ ತಂಗುದಾಣದಲ್ಲೂ ಕಸದ ತೊಟ್ಟಿ, ಗೋವುಗಳಿಗೆ ಕುಡಿಯುವ ನೀರು ತೊಟ್ಟಿಯೊಂದನ್ನು ನೀಡಿದ್ದು ಈ ತಂಡದ ಸಾಧನೆ.

ಮುಂಡ್ಲಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ಉಚಿತವಾಗಿ ಶಾಲೆ ಬ್ಯಾಗ್ ಹಾಗೂ ನೋಟ್ಸ್ ಪುಸ್ತಕಗಳನ್ನು ನೀಡುತ್ತ ಬಂದಿದೆ. ಒಣಕಸದ ಸಂಗ್ರಹಕ್ಕೆ ಕೈಚೀಲ ವಿತರಿಸುತ್ತಿದೆ. ಗ್ರಾಮದ ಹದಗೆಟ್ಟ ರಸ್ತೆಯಲ್ಲಿ ಬಸ್ ಬರಲು ನಿರಾಕರಿಸಿದಾಗ ಯುವಕರೇ ಹಣ ಹಾಕಿ ರಸ್ತೆ ದುರಸ್ತಿ ಕೆಲಸ ಕೈಗೆತ್ತಿಕೊಂಡರು. ಹೀಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಯುವ ಸ್ಪಂದನ ಸಂಘಟನೆ ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೇ ಕಾರ್ಯನಿರ್ವಹಿಸುತ್ತಿದೆ.

"ದಿನಕಳೆದಂತೆ ನಮ್ಮ ಸಂಘಟನೆ ಗ್ರಾಮದಲ್ಲಿ ಅನೇಕ ಸಾಮಾಜಿಕ ಕೆಲಸ ಮಾಡುತ್ತಾ, ಯುವಕರನ್ನು ಸಮಾಜ ಸೇವೆಯತ್ತ ಸೆಳೆಯುತ್ತ ಬಂದಿದೆ" ಎನ್ನುತ್ತಾರೆ.ಯುವ ಸ್ಪಂದನ ಸಂಘಟನೆ ಸಮಿತಿ ಸದಸ್ಯ ಸಂತೋಷ್ ವಿ ಶೆಟ್ಟಿ.
                                                                                                                       
                                                                                                  -ಸೌಮ್ಯ ಜಾರ್ಕಳ ಮುಂಡ್ಲಿ












Comments