ನಾ ಕಲಿತ ಶಾಲೆಯ ಹೇಗೆ ತಿರಿಸಲಿ ಋಣವ


 ನಾ ಕಲಿತ ಶಾಲೆಯ ಹೇಗೆ ತಿರಿಸಲಿ ಋಣವ

ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯಲ್ಲಿ, ಸರ್ಕಾರಿ ಶಾಲೆಗಳು ಅತ್ಯಂತ ದೀನ ಸ್ಥಿತಿಗೆ ತಲುಪುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಎಷ್ಟೇ ಉತ್ತಮ ಸೌಲಭ್ಯಗಳಿದ್ದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಹೀಗೆ ಅವನತಿಯಂಚಿನಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕೋ, ಬೇಡವೋ ಎಂಬ ಗೊಂದಲದಲ್ಲಿಯೇ ಆಳುವ ಸರ್ಕಾರಗಳು ದಿನದೂಡುತ್ತಿವೆ. ಇದರ ಮಧ್ಯೆ ಇಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರಕುತ್ತಿಲ್ಲ ಎಂಬ ಕೂಗು ಸಹ ಸಾಮಾಜಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಆದರೆ ಇಂತಹದ್ದೊಂದು ವಾತಾವರಣವಿರುವಾಗಲೂ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸರಿ ಸಮಾನವಾಗಿ ನಿಲ್ಲುವ ಶಾಲೆಯೊಂದು ಇಲ್ಲಿದೆ...ಅದೇ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಜಾರ್ಕಳ ಮುಂಡ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. 1957ರಲ್ಲಿ ದಿವಂಗತ ಲೋಕನಾಥ್ ಹೆಗ್ಡೆ ಅವರಿಂದ ಗುರುಕುಲ ಮಾದರಿಯಲ್ಲಿ ಪ್ರಾರಂಭಗೊಂಡ ಸಂಸ್ಥೆ. ಇದೀಗ ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಊರವರ ಸಹಕಾರದಿಂದ್ದ ಶಾಲಾ ದಾಖಲಾತಿಯು ಏರಿಕೆಯಾಗಿದೆ. ಈ ಶಾಲೆಯಲ್ಲಿ ಕಲಿತಂತಹ ಅನೇಕ ಹಳೆ ವಿದ್ಯಾರ್ಥಿಗಳ ಇಂದು ಶಿಕ್ಷಕರಾಗಿ, ನ್ಯಾಯವಾದಿಗಳಾಗಿ, ವೈದ್ಯರಾಗಿ,ಲೆಕ್ಕ ಪರಿಶೋಧಕರಾಗಿ ಉನ್ನತ ಹುದ್ದೆಯನ್ನು ಹೊಂದಿದ್ದಾರೆ. 2016-17ನೇ ಶೈಕ್ಷಣಿಕ ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಮೌಲ್ಯದ ಕೊಡುಗೆಯನ್ನು ಹಳೆ ವಿದ್ಯಾರ್ಥಿಗಳ ಸಂಘ ನೀಡಿದೆ.

ಶಾಲೆಯ ಕಂಪೌಂಡ್‍ನ್ನು ಒಳ ಹೊಕ್ಕಿದ ಕೂಡಲೇ ಇದು ಸರ್ಕಾರಿ ಶಾಲೆಯೋ, ಅಥವಾ ಖಾಸಗಿ ಶಾಲೆಯೋ ಎಂಬ ಪ್ರಶ್ನೆ ಹುಟ್ಟಿಸುತ್ತದೆ... ಪಠ್ಯ ಚಟುವಟಿಕೆಗಳ ಹೊರತಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆ, ಕಂಪ್ಯೂಟರ್ ಕಲಿಕೆ, ಚಿತ್ರಕಲಾ ತರಗತಿ ಹೀಗೆ ಅನೇಕ ವಿಶೇಷ ತರಬೇತಿಗಳಿವೆ. ಮಕ್ಕಳ ಸ್ವರಚಿತ ಬರಹಗಳಿಗೆ, ಅವರ ಅಭಿವ್ಯಕ್ತಿಗಳ ಸಂಗ್ರಹಕ್ಕೆ “ಕನಸು” ಎಂಬ ಮಾಸ ಹಸ್ತಪತ್ರಿಕೆ ವಿದ್ಯಾರ್ಥಿಗಳ ಕನಸನ್ನು ನನಸಾಗಿಸುವ ಮೆಟ್ಟಿಲಿನಂತಿದೆ. ಕ್ರಾಫ್ಟ್ ಹಾಗೂ ವರ್ಲಿ ಕಲೆಗಳ ತರಬೇತಿಗಳನ್ನು ಶಿಕ್ಷಕರು ಮಕ್ಕಳಿಗೆ ಕಲಿಸಿ ಕೊಡುತ್ತಾರೆ. ಹಾಗೇನೆ ಮಕ್ಕಳ ಬುದ್ಧಿ ಶಕ್ತಿ ಮಟ್ಟವನ್ನು ಹೆಚ್ಚಿಸುವ ಗ್ರಂಥಾಲಯ, ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸ್ಮಾರ್ಟ್ ಕ್ಲಾಸ್‍ಗಳ ಮೂಲಕ ಪ್ರಾಯೋಗಿಕ ತರಬೇತಿ, ಸ್ಪೋಕನ್ ಇಂಗ್ಲೀಷ್ ಕ್ಲಾಸ್, ಐಡಿ ಕಾರ್ಡ್, ಕ್ರೀಡಾ ಸಮವಸ್ತ್ರ, ಉಚಿತ ಬ್ಯಾಗ್, ನೋಟ್‍ಬುಕ್, ಊಟದ ತಟ್ಟೆ.. ಹೀಗೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಸೌಲಭ್ಯಗಳೊಂದಿಗೆ ಒಂದು ಮಾದರಿ ಶಾಲೆಯಾಗಿ ನಿಂತಿದೆ. ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘ, ಊರಿನ ಕೊಡುಗೈ ದಾನಿಗಳು ಹಾಗೂ ಗ್ರಾಮ ಪಂಚಾಯಿತಿಯ ಸಹಕಾರವೂ ಈ ಶಾಲೆಗಿರುವುದು ಪ್ರಮುಖ ಅಂಶ.

ಅಳಿವಿನಂಚಿನಲ್ಲಿದ್ದ ಈ ಸರ್ಕಾರಿ ಶಾಲೆಯನ್ನು ಸರ್ವೋತೋಮುಖ ಅಭಿವೃದ್ಧಿಯತ್ತ ತರುವಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪಾತ್ರ ಬಹು ದೊಡ್ಡದು. ಇಂತಹ
ಅಪರೂಪದ ಕಾರ್ಯ ಮಾಡಿದ ಸಂಘಕ್ಕೆ ಕರ್ನಾಟಕ ಸರ್ಕಾರ ಮಕ್ಕಳ ಹಕ್ಕುಗಳ ಆಯೋಗದಿಂದ "ಕಾರ್ಕಳ ತಾಲ್ಲೂಕಿನ ಉತ್ತಮ ಹಳೆ ವಿದ್ಯಾರ್ಥಿ ಸಂಘ" ಎಂಬ ಗೌರವಕ್ಕೂ ಪಾತ್ರವಾಗಿದೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಕೂಡ ಯಾವುದೇ ಖಾಸಗಿ ಶಾಲೆಗಳಿಗೆ ಸಮನಾಗಿ ಗುಣಮಟ್ಟದ ಶಿಕ್ಷಣ ನೀಡಬಲ್ಲದು ಹಾಗೂ ಉತ್ತಮ ಸೌಕರ್ಯವನ್ನು ನೀಡಿದರೆ ವಿದ್ಯಾರ್ಥಿಗಳನ್ನು ತನ್ನತ್ತಾ ಸೆಳೆಯುಬಲ್ಲದು ಎಂಬುದನ್ನು ಮುಂಡ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಯರೂಪದಲ್ಲಿ ಮಾಡಿ ತೋರಿಸಿದೆ.

"ನಾ ಕಲಿತ ಶಾಲೆಯ ತೀರಿಸುವೆ ಋಣವ" ಇದು ನನ್ನ ಜವಾಬ್ದಾರಿ ಎಂಬ ಮಕ್ಕಳ ಆಯೋಗ ಕರ್ನಾಟಕ ಸರಕಾರದ ದ್ಯೇಯವಾಕ್ಯಕ್ಕೆ ಪೂರಕವಾಗಿ ಈ ಸಂಸ್ಥೆಯ ಹಳೆ ವಿದ್ಯಾರ್ಥಿ  ಕಾರ್ಯ ನಿರ್ವಹಿಸುವತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಸೌರ್ಕಯವನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ಗುಣಾತ್ಮಕ ಶಿಕ್ಷಣದತ್ತ ಹೆಜ್ಚೆ:
ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆಯ ಮಧ್ಯೆ ಇವತ್ತು ನಮ್ಮ ಹಿರಿಯರು ಹೋರಾಡಿ ನಿರ್ಮಿಸಿದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಗ್ರಾಮದ ಏಕೈಕ ಸರ್ಕಾರಿ ಶಾಲೆಯನ್ನು ಉಳಿಸಲು ಗ್ರಾಮದ ಸರ್ವರ ಸಹಕಾರದ ಮೂಲಕ ಮಕ್ಕಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತ್ತಾ ಗುಣಾತ್ಮಕ ಶಿಕ್ಷಣದ ಕಡೆಗೆ ಹೆಜ್ಚೆ ಇಡುತ್ತಿದ್ದೇವೆ ಎನ್ನುತ್ತಾರೆ ಜಾರ್ಕಳ ಮುಂಡ್ಲಿ ಹಳೆ ವಿದ್ಯಾರ್ಥಿ ಪ್ರಜ್ಚಲ್ ಕುಮಾರ್ ಜೈನ್.

-ಸೌಮ್ಯ ಜಾರ್ಕಳ ಮುಂಡ್ಲಿ

Comments